ಜನಕ
 ಒಬ್ಬ ಪ್ರಸಿದ್ಧ ರಾಜಋಷಿ. ರಾಮಾಯಣ, ಮಹಾಭಾರತ ಮತ್ತು ಉಪನಿಷತ್ತುಗಳಲ್ಲಿ ಈತನ ವಿಷಯ ಬರುತ್ತದೆ. ಬೃಹದಾರಣ್ಯಕ ಉಪನಿಷತ್ತಿನ ಪ್ರಕಾರ ಜನಕನ ಸಭೆಗೆ ಅನೇಕ ತಾತ್ತ್ವಿಕರು ಬಂದು ತತ್ತ್ವ ವಿಚಾರದಲ್ಲಿ ಭಾಗವಹಿಸುತ್ತಿದ್ದರು. ಅವರಲ್ಲಿ ಯಾಜ್ಞವಲ್ಕ್ಯ ಒಬ್ಬ. ಜನಕ ಈತನಿಂದ ಆಧ್ಯಾತ್ಮ ತತ್ತ್ವದ ಉಪದೇಶ ಪಡೆದ.

ಜನಕನ ವಿಚಾರ ರಾಮಾಯಣದಲ್ಲಿ ವಿಸ್ತಾರವಾಗಿ ಬಂದಿದೆ. ಇಕ್ಷ್ವಾಕು ರಾಜನ ಮಗ ನಿಮಿ ವಸಿಷ್ಠನ ಶಾಪದಿಂದ ಅಸುನೀಗಿದಾಗ ದೇಶ ಅರಾಜಕವಾಯಿತು. ಆಗ ಪ್ರಜೆಗಳು ನಿಮಿಯ ಬಲತೋಳನ್ನು ಮಥನ ಮಾಡಲು ಅದರಿಂದ ಒಬ್ಬ ಪುರಷ ಜನಿಸಿದ. ಪ್ರಜೆಗಳು ಈತನಿಗೆ ವಿದೇಹ, ಮಿಥಿ, ಜನಕ ಎಂಬ ಹೆಸರು ಕೊಟ್ಟು ತಮ್ಮ ರಾಜನನ್ನಾಗಿ ಮಾಡಿಕೊಂಡರು. ಅಂದಿನಿಂದ ಆ ವಂಶದಲ್ಲಿ ಹುಟ್ಟಿದವರನ್ನು ಮೈಥಿಲ, ವೈದೇಹ, ಜನಕ ಎಂದು ಕರೆಯುವ ಪರಿಪಾಠ ಬೆಳೆಯಿತು. ಈ ವಂಶದಲ್ಲಿ ಹುಟ್ಟಿದ ಸೀರಧ್ವಜನೇ ರಾಮಾಯಣದಲ್ಲಿ ವಿಶೇಷ ಪಾತ್ರವಹಿಸಿದ ಜನಕ ಮಹಾರಾಜ.

ಜನಕನಿಗೆ ಬಹುಕಾಲದವರೆಗೆ ಮಕ್ಕಳಾಗಲಿಲ್ಲ. ಆದ್ದರಿಂದ ಅವನು ಪುತ್ರಕಾಮೇಷ್ಠಿಯಾಗಕ್ಕಾಗಿ ಗೊತ್ತಾದ ಸ್ಥಳವನ್ನು ಶೋಧಿಸಲು ನೇಗಿಲಿನಿಂದ ಉತ್ತಾಗ ಅದರ ತುದಿಗೆ ಒಂದು ಚಿನ್ನದ ಪೆಟ್ಟಿಗೆ ಸಿಕ್ಕಿತು. ಅದರಲ್ಲಿ ದೊರೆತ ಮಗುವೇ ಸೀತೆ. ಆ ಮೇಲೆ ಜನಕನಿಗೆ ಹುಟ್ಟಿದ ಮಗುವೇ ಊರ್ಮಿಳೆ.

ಅನಂತರ ಏರ್ಪಟ್ಟ ಸ್ವಯಂವರದಲ್ಲಿ ಶಿವಧನುರ್ಭಂಗ ಮಾಡಿದ ಶ್ರೀರಾಮನಿಗೆ ಸೀತೆಯನ್ನೂ ಲಕ್ಷ್ಮಣನಿಗೆ ಊರ್ಮಿಳೆಯನ್ನೂ ತನ್ನ ತಮ್ಮ ಕುಶಧ್ವಜನ ಪುತ್ರಿಯರಾದ ಮಾಡವೀ ಮತ್ತು ಶೃತಕೀರ್ತಿಯರನ್ನು ಭರತ ಶತೃಘ್ನರಿಗೂ ಕೊಟ್ಟು ಜನಕ ಮದುವೆ ಮಾಡಿದ.
ಜನಕ ಮಹಾಜ್ಞಾನಿ. ಮೇಧಾವಿ. ತತ್ತ್ವಜಿಜ್ಞಾಸು. ಮಹಾಭಾರತದ ಶಾಂತಿಪರ್ವದಲ್ಲೂ ಬೃಹದಾರಣ್ಯಕ ಉಪನಿಷತ್ತಿನಲ್ಲೂ ಜನಕನ ತಾತ್ತ್ವಿಕ ಶ್ರದ್ಧೆಯನ್ನೂ ಆತ ನಡೆಸಿದ ಸಂವಾದಗಳನ್ನೂ ವರ್ಣಿಸಿದೆ. ಮಾಂಡವ್ಯ ಮಹರ್ಷಿಯೊಂದಿಗೂ ಪರಾಶರ ಮಹರ್ಷಿಯೊಂದಿಗೂ ಜನಕ ನಡೆಸಿದ ಸಂವಾದಗಳು ಮುಖ್ಯವಾದುವು. ಪರಾಶರರೊಂದಿಗೆ ಮಾಡಿದ ಸಂವಾದ ಪರಾಶರ ನೀತಿಯೆಂದೇ ಪ್ರಸಿದ್ಧವಾಗಿದೆ. ಮಿಥಿಲೆ ಸುಡುತ್ತಿದ್ದರೂ ಜನಕ ಖಿನ್ನನಾಗದೆ ಮನಸ್ಥೈರ್ಯವನ್ನು ಹೊಂದಿದ್ದನೆಂದು ಶಾಂತಿಪರ್ವದಲ್ಲಿ ಹೇಳಿದೆ. ವನಪರ್ವದಲ್ಲಿ ಜನಕ ಕಪೋತ ಮುನಿಯೊಡನೆ ನಡೆಸಿದ ವಾದ ವರ್ಣಿತವಾಗಿದೆ. ಅಶ್ವಮೇಧ ಪರ್ವದಲ್ಲಿ ಜನಕ ಮೋಕ್ಷಕ್ಕೆ ಮಮಕಾರ ತ್ಯಾಗವೇ ಸಾಧನವೆಂದು ಒಬ್ಬ ಬ್ರಾಹ್ಮಣನಿಗೆ ಬೋಧಿಸಿದನೆಂದು ಹೇಳಿದೆ.
 				(ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ